ಬದನಿಕೆ
	ಲೋರ್ಯಾಂತೇಸೀ ಕುಟುಂಬಕ್ಕೆ ಸೇರಿದ ಪಾಶ್ರ್ವ ಪರಾವಲಂಗಿಡ (ಲೊರ್ಯಾಂತಸ್). ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಕಂಡುಬರುವ ಇದು, ಮಾವು, ಕಿತ್ತಳೆ, ಸೀತಾಫಲ, ಜಾಕಾಯಿ, ಬಾಗೆ, ಹೂವರಸಿ, ದಾಲ್ಚಿನ್ನಿ, ರೋಡೊಡೆಂಡ್ರಾನ್, ಎಡಮುರಿ, ಕುಂಕುಮದ ಗಿಡ ಮುಂತಾದ ಮರಗಳ ಮೇಲೆ ಬೆಳೆಯುತ್ತದೆ. ಇದರ ಬೇರುಗಳು ಆಶ್ರಯದಾತ ಮರದ ಕಾಂಡದೊಳಕ್ಕೆ ನುಗ್ಗಿ ನೀರ್ಗೊಳವೆಗಳನ್ನು ಹೊಕ್ಕು ನೀರನ್ನು ಹೀರಿಕೊಳ್ಳುತ್ತವೆ. ಹೀಗೆ ಆಶ್ರಯದಾತ ಗಿಡದಿಂದ ಹೀರಿಕೊಂಡ ನೀರನ್ನು ಬಳಸಿ ಆಹಾರವನ್ನು ತಾನೇ ತಯಾರಿಸುವ ಸಾಮಥ್ರ್ಯ ಬದನಿಕೆಗೆ ಉಂಟು.

ಬದನಿಕೆಯ ಎಲೆಗಳು ಬಲುಮಂದ : ಅಭಿಮುಖ ಅಥವಾ ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ವಿವಿಧ ಬಣ್ಣದವು ; ದ್ವಿಲಿಂಗಿಗಳು, ಪುಷ್ಪ ಪಾತ್ರೆ ಕೊಳವೆಯಾಕಾರದ್ದು ; ಅಂಡಾಶಯಕ್ಕೆ ಅಂಟಿಕೊಂಡಿರುತ್ತದೆ. ದಳಗಳ ಸಂಖ್ಯೆ 4-6 ದಳಗಳು ಬಿಡಿಯಾಗಿರಬಹುದು ಇಲ್ಲವೆ ಒಂದಕ್ಕೊಂದು ಅಂಟಿರಬಹುದು. ಕೇಸರಗಳು ದಳಗಳಿಗೆ ಅಂಟಿಕೊಂಡಿರುತ್ತವೆ. ಅಂಡಾಶಯದಲ್ಲಿ ಒಂದು ಕೋಶವೂ ಒಂದು ಅಂಡಕವೂ ಇವೆ. ಬೀಜಗಳು ಅಂಟು ಅಂಟಾಗಿರುವುದರಿಂದ ಪಕ್ಷಿಗಳ ಕೊಕ್ಕಿಗೆ ಅಂಟಿಕೊಳ್ಳುವುದರ ಮೂಲಕ ಪ್ರಸಾರವಾಗುತ್ತವೆ. ಹಕ್ಕಿಗಳು ತಮ್ಮ ಕೊಕ್ಕನ್ನು ಮರದ ರೆಂಬೆಗಳಿಗೆ ತಿಕ್ಕುವಾಗ ಬೀಜಗಳು ಅಲ್ಲಿ ಅಂಟಿಕೊಂಡು ಮೊಳಕೆಯೊಡೆಯುವುವು. ಆಶ್ರಯದಾತ ಗಿಡಗಳಿಗೆ ಬದನಿಕೆಯಿಂದ ಹಾನಿ ಉಂಟು. ಆಶ್ರಯದಾತ ಗಿಡಗಳ ಪೀಡಿತ ಭಾಗಗಳನ್ನು ಕತ್ತರಿಸಿಹಾಕುವುದರಿಂದ ಮಾತ್ರ ಇದನ್ನು ನಿಯಂತ್ರಿಸಬಹುದು.
(ಎಂ.ಸಿ.ಅರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ